ನಾಕ್ಸ್, ಎಡ್ಮಂಡ್ ಜಾರ್ಜ್ ವಾಲ್ಪಿ
	1881- ಇಂಗ್ಲಿಷ್ ಹಾಸ್ಯ ಲೇಖಕ, ಕವಿ. ತಂದೆ ರೆವರೆಂಡ್ ಇ. ಎ. ನಾಕ್ಸ್ ಮ್ಯಾಂಚೆಸ್ಟರಿನ ಬಿಷಪ್. ತಾಯಿ ಎಲೆನ್ ಪೆನಲಪೆ ಲಾಹೋರಿನ ಬಿಷಪ್ ಆಗಿದ್ದ ಡಾಕ್ಟರ್ ವಾಲ್ಟಿ ಫ್ರೆಂಚ್ ಅವರ ಮಗಳು. ಈ ದಂಪತಿಗಳ ಆರು ಜನ ಮಕ್ಕಳಲ್ಲಿ ಈತನೇ ಹಿರಿಯ. ಪ್ರಸಿದ್ಧ ಬರೆಹಗಾರ ಹಾಗೂ ಧಾರ್ಮಿಕ ಗುರು ಎನಿಸಿದ ರೊನಾಲ್ಡ್ ನಾಕ್ಸ್ ಈತನ ಸೋದರ.

	ಆಕ್ಸ್ ಫರ್ಡಿನ ರಗ್ಬಿ ಮತ್ತು ಕಾರ್ಪಸ್ ಕ್ರಿಸ್ಟಿ ಕಾಲೇಜುಗಳಲ್ಲಿ ಓದಿದ ಈತ 1912ರಲ್ಲಿ ಲಿಂಕನ್ನಿನ ಬಿಷಪ್‍ನ ಮಗಳಾದ ಕ್ರಿಸ್ಟೀನಾ ಫ್ರಾನ್ಸಿಸ್ ಹಿಕ್ಸ್‍ಳನ್ನು ಮದುವೆಯಾದ. ಇವರಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಆದರು. 1935ರಲ್ಲಿ ಪತ್ನೀವಿಯೋಗವಾಯಿತಾಗಿ, ಎರಡು ವರ್ಷಗಳ ಬಳಿಕ ಮತ್ತೆ ಮದುವೆಯಾದ. ಎರಡನೆಯ ಪತ್ನಿ ಮೇರಿ ಎಲಿಯೊನೊರ್ ಜೆರ್ಸಿ, ಪಂಚ್ ಪತ್ರಿಕೆಯ ಕಲಾವಿದ ಅರ್ನೆಸ್ಟ್ ಹೊವಾರ್ಡ್ ಷಪರ್ಡನ ಮಗಳು. ಈತ ಮೊದಲ ಮಹಾಯುದ್ಧದಲ್ಲಿ ಲಿಂಕನ್ ಷೈರಿನ ಪಡೆಯ ಯೋಧನಾಗಿ ಭಾಗವಹಿಸಿ ಕಾದಿ ಗಾಯಗೊಂಡ.

	1911ರಲ್ಲಿ ಈತನ ಪ್ರಥಮ ಹಾಸ್ಯಕವನಸಂಕಲನವಾದ ದಿ ಬ್ರೇಸನ್ ಲೈರ್ ಪ್ರಕಟವಾಯಿತು. ಅನಂತರ ಎ ಲಿಟ್ಲ್ ಲೂಟ್ (1919) ಮತ್ತು ಪ್ಯಾರಡೀಸ್ ರೀಗೇಯ್ನಡ್ (1921) ಎಂಬ ಪುಸ್ತಕಗಳು ಹೊರಬಂದವು. ಅನಂತರ ಈತ ಹಾಸ್ಯಕ್ಕೆ ಮೀಸಲಾದ ಪಂಚ್ ಪತ್ರಿಕೆಯು ನಿಯತಕಾಲಿಕ ಬರೆಹಗಾರನಾದ. ಇವೊ ಎಂಬುದು ಈತನ ಕಾವ್ಯನಾಮ. ಸರ್ ಓವೆನ್ ಸೀಮನ್ನನ ಅನಂತರ 1932ರಿಂದ 1940ರವರೆಗೂ ಈತನೇ ಪಂಚ್ ಪತ್ರಿಕೆಯ ಸಂಪಾದಕನಾದ. ಈತನ ಲೇಖನಗಳ, ಹಾಸ್ಯ ಕವನಗಳ ಸಂಕಲನಗಳು ಒಂದೊಂದಾಗಿ, ದೀಸ್ ಲಿಬರ್ಟೀಸ್ (1923); ಕ್ವೇಂಟ್ ಸ್ಪೆಸಿಮನ್ಸ್ (1925), ಹಿಯರ್ ಈಸ್ ಮಿಸರಿ (1931); ಫಾಲಿ ಜಕಾಲಿಂಗ್ (1932) ಎಂಬ ಹೆಸರುಗಳಲ್ಲಿ ಪ್ರಕಟವಾದವು. ಅಲ್ಲದೆ ಹ್ಯೂಮರಸ್ ವರ್ಸ್ (1931) ಎಂಬ ಒಂದು ಕವನಸಂಕಲನವನ್ನೂ ಈತ ಸಂಪಾದಿಸಿದ್ದಾನೆ.

	ಗಾಲ್ಫ್ ಆಟ, ಮೀನು ಹಿಡಿಯುವುದು ಈತನ ಪ್ರಿಯ ಹವ್ಯಾಸಗಳು. ಆನ್ ಅವರ್ ಫ್ರಮ್ ವಿಕ್ಟೋರಿಯ ಅಂಡ್ ಅದರ್ ಎಕ್ಸ್‍ಕರ್ಷನ್ಸ್; ಫ್ಯಾನ್ಸಿ ನೌ; ದಿಸ್ ಅದರ್ ಈಡನ್; ಸ್ಲೈಟ್ ಇರಿಟೇಷನ್ಸ್; ಫಿಕ್ಷನ್ ಆಸ್ ಷಿ ಈಸ್ ರೋಟ್- ಇವು ಈತನ ಕೃತಿಗಳು.

	ಇಂಗ್ಲಿಷ್ ಸಾಹಿತ್ಯದ ಹಾಸ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಲೇಖಕರಲ್ಲಿ ಈತ ಹೆಸರಾದವ.
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ